ಬಿಪಿಎಲ್ ರೇಷನ್ ಕಾರ್ಡ್ (BPL Card) ರದ್ದಾಗಿದೆ ಎಂದು ಆತಂಕಗೊಂಡಿರುವ ಹಾಗೂ ಹೊಸ ಕಾರ್ಡ್‌ಗಾಗಿ ಕಾಯುತ್ತಿರುವ ಜನಸಾಮಾನ್ಯರಿಗೆ ಆಹಾರ ಮತ್ತು ನಾಗರಿಕ ಪೂರೈಕೆ ಸಚಿವ ಕೆ.ಎಚ್. ಮುನಿಯಪ್ಪ ಮಹತ್ವದ ಮಾಹಿತಿಯೊಂದನ್ನು ನೀಡಿದ್ದಾರೆ.
ಯಾವುದೇ ಅರ್ಹ ಫಲಾನುಭವಿಯ ಬಿಪಿಎಲ್ ಕಾರ್ಡ್ ರದ್ದಾಗಿಲ್ಲ. ಒಂದು ವೇಳೆ ರದ್ದಾಗಿದ್ದರೂ, ಕೇವಲ 15 ದಿನಗಳಲ್ಲಿ ಮರಳಿ ಒದಗಿಸಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.
ಗುರುವಾರ ಬೆಂಗಳೂರಿನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ನಡೆಯುತ್ತಿರುವ ರೇಷನ್ ಕಾರ್ಡ್ ಪರಿಷ್ಕರಣೆ ಕುರಿತ ಗೊಂದಲಗಳಿಗೆ ಸ್ಪಷ್ಟನೆ ನೀಡಿದರು.
ರದ್ದಾಗಿದ್ದರೆ ಏನು ಮಾಡಬೇಕು? ನಿಜವಾದ ಅರ್ಹ ಫಲಾನುಭವಿಗಳಾಗಿದ್ದು, ನಿಮ್ಮ ಬಿಪಿಎಲ್ ಕಾರ್ಡ್ ರದ್ದಾಗಿದ್ದರೆ ಆತಂಕ ಪಡುವ ಅಗತ್ಯವಿಲ್ಲ. ಸಚಿವರು ತಿಳಿಸಿರುವಂತೆ, ಕಾರ್ಡ್ ಕಳೆದುಕೊಂಡವರು ನೇರವಾಗಿ ತಮ್ಮ ತಾಲೂಕಿನ ‘ತಹಶೀಲ್ದಾರ್’ ಕಚೇರಿಗೆ ತೆರಳಿ ಅರ್ಜಿ ಸಲ್ಲಿಸಬೇಕು.
ಅಧಿಕಾರಿಗಳು ಅರ್ಜಿಯನ್ನು ಪರಿಶೀಲಿಸಿ, ಕೇವಲ 15 ದಿನಗಳ ಒಳಗಾಗಿ ಅರ್ಹರಿಗೆ ಹೊಸ ಬಿಪಿಎಲ್ ಕಾರ್ಡ್ ಒದಗಿಸಲಿದ್ದಾರೆ. ಈ ಬಗ್ಗೆ ಈಗಾಗಲೇ ವಿಧಾನಸದನದಲ್ಲೂ ಸರ್ಕಾರ ಅಧಿಕೃತವಾಗಿ ಉತ್ತರ ನೀಡಿದೆ.
ಪರಿಷ್ಕರಣೆ ಯಾಕೆ ನಡೆಯುತ್ತಿದೆ? ರಾಜ್ಯದಲ್ಲಿ ಬಿಪಿಎಲ್ ಕಾರ್ಡ್‌ಗಳ ಪರಿಷ್ಕರಣೆ ನಡೆಯುತ್ತಿರುವುದು ನಿಜ. ಆದರೆ ಇದು ಬಡವರ ಕಾರ್ಡ್ ಕಸಿದುಕೊಳ್ಳುವುದಕ್ಕಲ್ಲ, ಬದಲಾಗಿ ಅನರ್ಹರನ್ನು ಪತ್ತೆಹಚ್ಚಲು. ಸಚಿವರು ನೀಡಿದ ಮಾಹಿತಿಯ ಪ್ರಕಾರ:
- ರಾಜ್ಯದಲ್ಲಿ ಬರೋಬ್ಬರಿ 14 ಲಕ್ಷ ಕುಟುಂಬಗಳು ಎಪಿಎಲ್ (APL) ಅರ್ಹತೆ ಹೊಂದಿದ್ದರೂ, ಬಿಪಿಎಲ್ ಕಾರ್ಡ್ ಪಡೆದುಕೊಂಡಿದ್ದಾರೆ.
- ಹಾಗೆಯೇ 7 ಲಕ್ಷ ಜನರು ಎಪಿಎಲ್ ಅರ್ಹತೆಯನ್ನೂ ಮೀರಿ (ಆರ್ಥಿಕವಾಗಿ ಸಬಲರಾಗಿದ್ದರೂ) ಕಾರ್ಡ್ ಹೊಂದಿದ್ದಾರೆ.
ಅನರ್ಹರ ಕಾರ್ಡ್‌ಗಳು ಎಪಿಎಲ್‌ಗೆ ವರ್ಗಾವಣೆ ಕೇಂದ್ರ ಸರ್ಕಾರದ ಸೂಚನೆಯಂತೆ ಇಂತಹ ಅನರ್ಹರನ್ನು ಪತ್ತೆ ಹಚ್ಚಿ, ಅವರ ಬಿಪಿಎಲ್ ಕಾರ್ಡ್‌ಗಳನ್ನು ಎಪಿಎಲ್ ಆಗಿ ಪರಿವರ್ತಿಸುವ ಪ್ರಕ್ರಿಯೆ ನಡೆಯುತ್ತಿದೆ.
“ಈ ಪರಿಷ್ಕರಣೆಯನ್ನು ಅತ್ಯಂತ ನಿಧಾನವಾಗಿ, ಹಂತ ಹಂತವಾಗಿ ಮಾಡಲಾಗುತ್ತಿದೆ. ಇದರಿಂದ ನಿಜವಾದ ಬಡವರಿಗೆ ಹಾಗೂ ಅರ್ಹ ಬಿಪಿಎಲ್ ಕಾರ್ಡ್‌ದಾರರಿಗೆ ಯಾವುದೇ ರೀತಿಯ ತೊಂದರೆಯಾಗುವುದಿಲ್ಲ” ಎಂದು ಮುನಿಯಪ್ಪ ಸ್ಪಷ್ಟಪಡಿಸಿದ್ದಾರೆ.