ಗ್ರಾಮೀಣ ಭಾಗದ ಜನರಿಗೆ ತಮ್ಮ ಆಸ್ತಿ ದಾಖಲೆಗಳನ್ನು ಪಡೆಯಲು ಸರ್ಕಾರಿ ಕಚೇರಿಗಳಿಗೆ ಅಲೆಯುವುದನ್ನು ತಪ್ಪಿಸುವ ನಿಟ್ಟಿನಲ್ಲಿ ರಾಜ್ಯ ಸರ್ಕಾರ ಮಹತ್ವದ ಹೆಜ್ಜೆಯಿಟ್ಟಿದೆ.
ಇನ್ನು ಮುಂದೆ ಸಾರ್ವಜನಿಕರು ಆಸ್ತಿ ಹಕ್ಕು ದಾಖಲೆಯಾದ ‘ಇ-ಸ್ವತ್ತು’ (e-Swathu) ಸೇವೆಗಳಿಗಾಗಿ ತಮ್ಮ ಸಮೀಪದ ಬಾಪೂಜಿ ಸೇವಾ ಕೇಂದ್ರ (ಗ್ರಾಮ ಒನ್), ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.
ಆಡಳಿತವನ್ನು ಜನಸಾಮಾನ್ಯರ ಮನೆ ಬಾಗಿಲಿಗೆ ಕೊಂಡೊಯ್ಯುವ ಉದ್ದೇಶದಿಂದ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ (RDPR) ಹಾಗೂ ಇ-ಆಡಳಿತ ಇಲಾಖೆಯ ‘ನಾಗರಿಕ ಸೇವೆಗಳ ವಿದ್ಯುನ್ಮಾನ ವಿತರಣಾ ನಿರ್ದೇಶನಾಲಯ (EDCS)’ ನಡುವೆ ಈ ಮಹತ್ವದ ಒಪ್ಪಂದ ಏರ್ಪಟ್ಟಿದೆ.
ಈ ಹೊಸ ವ್ಯವಸ್ಥೆಯಿಂದಾಗಿ ಪಂಚಾಯಿತಿ ಕಚೇರಿಗಳಲ್ಲಿನ ದಟ್ಟಣೆ ಕಡಿಮೆಯಾಗುವುದರ ಜೊತೆಗೆ, ಜನರಿಗೆ ತ್ವರಿತವಾಗಿ ಸೇವೆ ಲಭ್ಯವಾಗಲಿದೆ.
ಮೂರು ವರ್ಷಗಳ ಒಪ್ಪಂದ; ಸಿಬ್ಬಂದಿಗೆ ವಿಶೇಷ ತರಬೇತಿ ಇದೆರಡು ಇಲಾಖೆಗಳ ನಡುವಿನ ಈ ಒಪ್ಪಂದವು ಮುಂದಿನ ಮೂರು ವರ್ಷಗಳ ಕಾಲ ಚಾಲ್ತಿಯಲ್ಲಿರಲಿದೆ.
ರಾಜ್ಯದಾದ್ಯಂತ ಇರುವ ಎಲ್ಲಾ ಸಮಗ್ರ ನಾಗರಿಕ ಸೇವಾ ಕೇಂದ್ರಗಳಲ್ಲಿ ಇ-ಸ್ವತ್ತು ಅರ್ಜಿ ಸಲ್ಲಿಕೆಯನ್ನು ಸುಗಮಗೊಳಿಸಲು, ಕೇಂದ್ರದ ನಿರ್ವಾಹಕರಿಗೆ ಗ್ರಾಮೀಣಾಭಿವೃದ್ಧಿ ಇಲಾಖೆಯಿಂದಲೇ ವಿಶೇಷ ತರಬೇತಿ ನೀಡಲಾಗುತ್ತದೆ.
ಭದ್ರತಾ ದೃಷ್ಟಿಯಿಂದ ಪ್ರತಿಯೊಬ್ಬ ನಿರ್ವಾಹಕರಿಗೂ ಪ್ರತ್ಯೇಕ ಲಾಗಿನ್ (Login) ಐಡಿ ಒದಗಿಸಲಾಗುತ್ತಿದ್ದು, ಸೇವೆಗಳ ಉಸ್ತುವಾರಿಗಾಗಿ ನೋಡಲ್ ಅಧಿಕಾರಿಗಳನ್ನು ನೇಮಿಸಲಾಗುತ್ತಿದೆ.
ಶುಲ್ಕದ ವಿವರ:
ನಾಗರಿಕರಿಗೆ ಹೊರೆಯಾಗದ ದರ ಸಾರ್ವಜನಿಕರಿಗೆ ಪಾರದರ್ಶಕ ಸೇವೆ ಒದಗಿಸುವ ನಿಟ್ಟಿನಲ್ಲಿ ಸರ್ಕಾರ ಶುಲ್ಕವನ್ನು ಮೊದಲೇ ನಿಗದಿಪಡಿಸಿದೆ:
- ಹೊಸ ಖಾತಾ ಸೇವೆಗೆ: ರೂ. 45/- (ಅರ್ಜಿದಾರರು ಪಾವತಿಸಬೇಕು)
- ದಾಖಲೆಗಳ ಸ್ಕ್ಯಾನಿಂಗ್ ಮತ್ತು ಅಪ್ಲೋಡ್: ಪ್ರತಿ ಪುಟಕ್ಕೆ ರೂ. 5/-
ಸೇವಾ ಕೇಂದ್ರಗಳ ಕಾರ್ಯನಿರ್ವಹಣಾ ಸಮಯ: ಗ್ರಾಮ ಒನ್, ಕರ್ನಾಟಕ ಒನ್ ಹಾಗೂ ಬೆಂಗಳೂರು ಒನ್ ಕೇಂದ್ರಗಳು ವಾರದ ಎಲ್ಲ ದಿನಗಳಲ್ಲೂ ಸಾರ್ವಜನಿಕರಿಗೆ ಮುಕ್ತವಾಗಿರಲಿವೆ.
- ಸಮಯ: ಪ್ರತಿದಿನ ಬೆಳಿಗ್ಗೆ 8 ರಿಂದ ಸಂಜೆ 7 ರವರೆಗೆ.
- ರಜಾ ದಿನಗಳು: ವರ್ಷದಲ್ಲಿ ಸ್ವಾತಂತ್ರ್ಯ ದಿನಾಚರಣೆ, ಗಣರಾಜ್ಯೋತ್ಸವ, ಕಾರ್ಮಿಕರ ದಿನ, ಗಾಂಧಿ ಜಯಂತಿ, ಕನ್ನಡ ರಾಜ್ಯೋತ್ಸವ ಮತ್ತು ಚುನಾವಣೆ/ಮತದಾನದ ದಿನ ಈ 6 ದಿನಗಳು ಮಾತ್ರ ಸೇವಾ ಕೇಂದ್ರಗಳಿಗೆ ರಜೆ ಇರುತ್ತದೆ. ಉಳಿದ ಎಲ್ಲಾ ದಿನಗಳಲ್ಲಿ ಸಾರ್ವಜನಿಕರು ಇ-ಸ್ವತ್ತು ಸೇರಿದಂತೆ ಇತರ ಸೇವೆಗಳನ್ನು ಪಡೆಯಬಹುದು.
ಸರ್ಕಾರದ ಈ ಹೊಸ ನಡೆಯಿಂದಾಗಿ ಆಸ್ತಿ ಖಾತೆ ಮಾಡಿಸುವ ಪ್ರಕ್ರಿಯೆಯಲ್ಲಿ ಮಧ್ಯವರ್ತಿಗಳ ಹಾವಳಿ ತಪ್ಪಲಿದ್ದು, ಜನಸಾಮಾನ್ಯರ ಸಮಯ ಮತ್ತು ಹಣ ಎರಡೂ ಉಳಿತಾಯವಾಗಲಿದೆ ಎಂದು ನಿರೀಕ್ಷಿಸಲಾಗಿದೆ.
ಒಳ ಮೀಸಲಾತಿ ಹಂಚಿಕೆಯ ‘ತ್ರಿ-ಸೂತ್ರ’ ಫೈನಲ್: ಯಾವ ಸಮುದಾಯಕ್ಕೆ ಎಷ್ಟು ಪಾಲು?