ರಾಜ್ಯದಲ್ಲಿ ಕಳೆದ ಹಲವು ದಶಕಗಳಿಂದ ಕಗ್ಗಂಟಾಗಿದ್ದ ಹಾಗೂ ರಾಜಕೀಯವಾಗಿ ಭಾರಿ ಸಂಚಲನ ಸೃಷ್ಟಿಸಿದ್ದ ‘ಪರಿಶಿಷ್ಟ ಜಾತಿ ಒಳ ಮೀಸಲಾತಿ’ (SC Internal Reservation) ಜಾರಿಗೆ ಕೊನೆಗೂ ರಾಜ್ಯ ಸರ್ಕಾರ ಅಧಿಕೃತ ಮುದ್ರೆ ಒತ್ತಿದೆ.
ಶುಕ್ರವಾರ (ಏಪ್ರಿಲ್ 24) ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದಲ್ಲಿ ನಡೆದ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಒಳ ಮೀಸಲಾತಿ ಹಂಚಿಕೆಯ ‘ತ್ರಿ-ಸೂತ್ರ’ವನ್ನು ಅಂತಿಮಗೊಳಿಸಿ ಐತಿಹಾಸಿಕ ತೀರ್ಮಾನ ಕೈಗೊಳ್ಳಲಾಗಿದೆ.
ಸುಪ್ರೀಂ ಕೋರ್ಟ್ನ ಆದೇಶದಂತೆ ಮೀಸಲಾತಿ ಪ್ರಮಾಣ ಶೇ. 50 ರ ಮಿತಿ ಮೀರಬಾರದು ಎಂಬ ಕಟ್ಟುನಿಟ್ಟಿನ ನಿಯಮವಿರುವುದರಿಂದ, ಪ್ರಸ್ತುತ ಲಭ್ಯವಿರುವ ಶೇ. 15 ರಷ್ಟು ಎಸ್ಸಿ ಮೀಸಲಾತಿಯೊಳಗೇ ಎಲ್ಲರಿಗೂ ಸಮಾನ ಹಂಚಿಕೆ ಮಾಡಲು ಕ್ಯಾಬಿನೆಟ್ ನಿರ್ಧರಿಸಿದೆ.
ಒಳ ಮೀಸಲಾತಿ ಹಂಚಿಕೆಗಾಗಿ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ನೇತೃತ್ವದಲ್ಲಿ ರಚಿಸಲಾಗಿದ್ದ ‘ತಾಂತ್ರಿಕ ಸಮಿತಿ’ಯು ಶುಕ್ರವಾರ ತನ್ನ ವರದಿಯನ್ನು ಸಂಪುಟದ ಮುಂದಿಟ್ಟಿತ್ತು.
ಈ ವರದಿಯಲ್ಲಿ ಲಭ್ಯವಿರುವ ಶೇ. 15 ರಷ್ಟು ಮೀಸಲಾತಿಯನ್ನು ಎಡಗೈ ಸಮುದಾಯಕ್ಕೆ 5.3%, ಬಲಗೈ ಸಮುದಾಯಕ್ಕೆ 5.3% ಹಾಗೂ ಇತರರಿಗೆ 4.4% ಹಂಚಿಕೆ ಮಾಡಲು ಶಿಫಾರಸು ಮಾಡಲಾಗಿತ್ತು. ಆದರೆ, ಸಂಪುಟ ಸಭೆಯಲ್ಲಿ ಈ ಬಗ್ಗೆ ಸುದೀರ್ಘ ಚರ್ಚೆ ನಡೆಸಿದ ಸಚಿವರು, ಅಂತಿಮವಾಗಿ 5.25-5.25-4.5 ರ ಅನುಪಾತದಲ್ಲಿ ಮೀಸಲಾತಿ ನಿಗದಿಪಡಿಸಲು ಸರ್ವಾನುಮತದ ಒಪ್ಪಿಗೆ ನೀಡಿದ್ದಾರೆ.
ಯಾವ ಸಮುದಾಯಕ್ಕೆ ಎಷ್ಟು ಮೀಸಲಾತಿ?
| ವರ್ಗೀಕರಣ (ಪ್ರವರ್ಗ) | ನಿಗದಿಪಡಿಸಿದ ಮೀಸಲಾತಿ |
|---|---|
| ಪ್ರವರ್ಗ ಎ: ದಲಿತ ಎಡಗೈ ಸಮುದಾಯ (SC-Left) | 5.25% |
| ಪ್ರವರ್ಗ ಬಿ: ದಲಿತ ಬಲಗೈ ಸಮುದಾಯ (SC-Right) | 5.25% |
| ಪ್ರವರ್ಗ ಸಿ: ಇತರೆ ಸಮುದಾಯಗಳು (ಸ್ಪೃಶ್ಯ, ಅಲೆಮಾರಿ) | 4.5% |
56 ಸಾವಿರ ಹುದ್ದೆಗಳ ನೇಮಕಾತಿ ಶುರು: ಸಿಎಂ ಸಿದ್ದರಾಮಯ್ಯ ಸಂಪುಟ ಸಭೆಯ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, “ರಾಜ್ಯ ಬಜೆಟ್ನಲ್ಲಿ ಘೋಷಿಸಿದಂತೆ 56,432 ಸರ್ಕಾರಿ ಹುದ್ದೆಗಳನ್ನು ಭರ್ತಿ ಮಾಡಲಿದ್ದು, ಈ ಎಲ್ಲಾ ನೇಮಕಾತಿಗಳಿಗೂ ಇದೇ (5.25 : 5.25 : 4.5) ಮೀಸಲಾತಿ ಅನುಪಾತವೇ ಅನ್ವಯವಾಗಲಿದೆ. ಖಾಲಿ ಹುದ್ದೆಗಳನ್ನು ಹಂತ-ಹಂತವಾಗಿ ಭರ್ತಿ ಮಾಡುವ ಪ್ರಕ್ರಿಯೆ ಇನ್ನು ಮುಂದೆ ಶುರುವಾಗಲಿದೆ” ಎಂದು ಘೋಷಿಸಿದರು.
“ಹಿಂದೆ ನಾವು ಒಟ್ಟು ಮೀಸಲಾತಿಯನ್ನು 6-6-5 ಅನುಪಾತದಲ್ಲಿ ಹಂಚಿಕೆ ಮಾಡಿ ಕಾನೂನು ರೂಪಿಸಿದ್ದೆವು. ಆದರೆ ಮೀಸಲಾತಿ ಶೇ. 50 ಮೀರಬಾರದು ಎಂಬ ಸುಪ್ರೀಂ ಕೋರ್ಟ್ ಆದೇಶ ( ಇಂದಿರಾ ಸಹಾನಿ ಪ್ರಕರಣ) ಹಾಗೂ ಅಲೆಮಾರಿ ಸಮುದಾಯಗಳು ಕೋರ್ಟ್ ಮೆಟ್ಟಿಲೇರಿದ್ದರಿಂದ ರೋಸ್ಟರ್ ಬಿಂದುವಿನಲ್ಲಿ ಗೊಂದಲ ಉಂಟಾಗಿತ್ತು.
ಇದೀಗ ಎಲ್ಲವನ್ನೂ ಸರಿಪಡಿಸಿದ್ದೇವೆ. ‘ಸಮಬಾಳು-ಸಮಪಾಲು’ ಹಾಗೂ ಯಾರಿಗೂ ಅನ್ಯಾಯವಾಗಬಾರದು ಎನ್ನುವುದು ನಮ್ಮ ಪಕ್ಷದ ನಿಲುವು. ಎಲ್ಲ ದಲಿತ ಸಂಘಟನೆಗಳು ಇದನ್ನು ಒಪ್ಪಿಕೊಳ್ಳುವ ವಿಶ್ವಾಸವಿದೆ” ಎಂದು ಸಿಎಂ ವಿವರಿಸಿದರು.
ರಾಷ್ಟ್ರಕ್ಕೆ ಮಾದರಿಯಾದ ನಿರ್ಣಯ:
ಎಚ್.ಕೆ. ಪಾಟೀಲ್ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಎಚ್.ಕೆ. ಪಾಟೀಲ್ ಮಾತನಾಡಿ, “ರಾಷ್ಟ್ರಕ್ಕೇ ಮಾದರಿಯಾಗಬಲ್ಲ, ಜನರ ಬದುಕಿಗೆ ವಿಶೇಷ ತಿರುವು ನೀಡುವ ತೀರ್ಮಾನವಿದು. ರೋಸ್ಟರ್ ವಿಚಾರದಲ್ಲಿದ್ದ ಭಾರಿ ಗೊಂದಲಗಳಿಗೆ ಸೂಕ್ತ ಪರಿಹಾರ ಕಂಡು, ಎಲ್ಲಾ ಸಮುದಾಯಗಳನ್ನು ಹಾಗೂ ಸದನವನ್ನು ವಿಶ್ವಾಸಕ್ಕೆ ತೆಗೆದುಕೊಂಡು ನಿರ್ಣಯ ಕೈಗೊಳ್ಳುವಲ್ಲಿ ಸಿಎಂ ಯಶಸ್ವಿಯಾಗಿದ್ದಾರೆ” ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ದಶಕಗಳಿಂದ ಕೇವಲ ಭರವಸೆಗಳನ್ನೇ ಕೇಳುತ್ತಿದ್ದ ಅವಕಾಶ ವಂಚಿತ ಅತಿ ಹಿಂದುಳಿದ ದಲಿತ ಸಮುದಾಯಗಳ ಪಾಲಿಗೆ, ಶುಕ್ರವಾರದ ಕ್ಯಾಬಿನೆಟ್ ನಿರ್ಣಯವು ಸರ್ಕಾರಿ ಉದ್ಯೋಗ ಹಾಗೂ ಶಿಕ್ಷಣದಲ್ಲಿ ಹೊಸ ಭರವಸೆಯನ್ನು ಮೂಡಿಸಿದೆ.
ಕೃಷಿ ಇಲಾಖೆ ಭರ್ಜರಿ ನೇಮಕಾತಿ 2026; ಹುದ್ದೆಗಳ ಭರ್ತಿಗೆ ಅರ್ಜಿ ಆಹ್ವಾನ
SSC Recruitment 2026: ವಿವಿಧ ಹುದ್ದೆಗಳ ನೇಮಕಾತಿಗಾಗಿ ಅರ್ಜಿ ಆಹ್ವಾನ