Karnataka Weather Alert: ರಾಜ್ಯಾದ್ಯಂತ ಏಪ್ರಿಲ್ 8 ರವರೆಗೆ ಬಿರುಗಾಳಿ ಸಹಿತ ಮಳೆ: ಹವಾಮಾನ ಇಲಾಖೆ ಎಚ್ಚರಿಕೆ

ಬೇಸಿಗೆಯ ಕಡುಬಿಸಿಲಿನ ನಡುವೆಯೇ ರಾಜ್ಯದ ಹವಾಮಾನದಲ್ಲಿ ದಿಢೀರ್ ಬದಲಾವಣೆಯಾಗಿದೆ. ಇಂದಿನಿಂದ (ಏಪ್ರಿಲ್ 3) ಮುಂದಿನ ಐದು ದಿನಗಳ ಕಾಲ, ಅಂದರೆ ಏಪ್ರಿಲ್ 8 ರವರೆಗೆ ರಾಜ್ಯಾದ್ಯಂತ ಗುಡುಗು, ಬಿರುಗಾಳಿ ಸಹಿತ ಮಳೆಯಾಗುವ ಮುನ್ಸೂಚನೆಯನ್ನು ಹವಾಮಾನ ಇಲಾಖೆ (IMD) ನೀಡಿದೆ.

ತಮಿಳುನಾಡಿನಿಂದ ಕೊಂಕಣ ಭಾಗದವರೆಗೆ ಸಮುದ್ರ ಮಟ್ಟದಿಂದ 0.9 ಕಿ.ಮೀ ಎತ್ತರದಲ್ಲಿ ಟ್ರಫ್ (ಗಾಳಿಯ ಅಸ್ಥಿರತೆ) ಸೃಷ್ಟಿಯಾಗಿರುವುದರಿಂದ ಈ ಅಕಾಲಿಕ ಮಳೆಯಾಗಲಿದ್ದು, ಸಿಲಿಕಾನ್ ಸಿಟಿ ಬೆಂಗಳೂರು ಸೇರಿದಂತೆ ರಾಜ್ಯದ 18 ಜಿಲ್ಲೆಗಳಲ್ಲಿ ವರುಣನ ಆರ್ಭಟ ಇರಲಿದೆ.

ಯಾವ ದಿನ, ಯಾವ ಜಿಲ್ಲೆಯಲ್ಲಿ ಮಳೆಯಾಗಲಿದೆ? ಹವಾಮಾನ ಇಲಾಖೆಯ ಸಂಪೂರ್ಣ ವರದಿ ಇಲ್ಲಿದೆ:

ಇಂದು ಎಲ್ಲೆಲ್ಲಿ ಮಳೆ? ಕರಾವಳಿ ಮತ್ತು ಉತ್ತರ ಕರ್ನಾಟಕದ ಕೆಲವು ಭಾಗಗಳಲ್ಲಿ ಇಂದು ಮಳೆಯಾಗಲಿದೆ. ದಕ್ಷಿಣ ಕನ್ನಡ, ಉಡುಪಿ, ವಿಜಯಪುರ, ಬಾಗಲಕೋಟೆ, ಕಲಬುರ್ಗಿ, ಬೀದರ್, ಕೊಪ್ಪಳ, ರಾಯಚೂರು, ಯಾದಗಿರಿ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಶಿವಮೊಗ್ಗ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಗಳ ಅಲ್ಲಲ್ಲಿ ಜೋರಾದ ಗಾಳಿ ಸಹಿತ ಸಾಧಾರಣ ಮಳೆಯಾಗುವ ಸಾಧ್ಯತೆ ಇದೆ.

ನಾಳೆ ಬೆಂಗಳೂರಿಗೂ ಮಳೆಯ ಎಂಟ್ರಿ: ನಾಳೆ (ಏಪ್ರಿಲ್ 4) ರಾಜಧಾನಿ ಬೆಂಗಳೂರು ನಗರ ಹಾಗೂ ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಿಗೂ ಮಳೆಯಾಗುವ ಮುನ್ಸೂಚನೆ ಇದೆ. ಇದರ ಜೊತೆಗೆ ದಕ್ಷಿಣ ಕನ್ನಡ, ಉಡುಪಿ, ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಕೊಪ್ಪಳ, ವಿಜಯಪುರ, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಗಂಟೆಗೆ 30-40 ಕಿ.ಮೀ ವೇಗದ ಬಿರುಗಾಳಿ ಸಹಿತ ಮಳೆಯಾಗುವ ಎಚ್ಚರಿಕೆ ನೀಡಲಾಗಿದೆ.

ಭಾನುವಾರ ಎಲ್ಲೆಲ್ಲಿ ಇರಲಿದೆ ವರುಣನ ಆರ್ಭಟ?: ಭಾನುವಾರ ಕರಾವಳಿ ಭಾಗದಲ್ಲಿ ಮಳೆ ಕೊಂಚ ಬಿಡುವು ನೀಡಲಿದ್ದು, ಒಳನಾಡಿನಲ್ಲಿ ಮುಂದುವರಿಯಲಿದೆ. ಕೊಪ್ಪಳ, ಗದಗ, ರಾಯಚೂರು, ಧಾರವಾಡ, ಬಳ್ಳಾರಿ, ವಿಜಯನಗರ, ದಾವಣಗೆರೆ, ಚಿತ್ರದುರ್ಗ, ತುಮಕೂರು, ಚಿಕ್ಕಬಳ್ಳಾಪುರ, ಕೋಲಾರ, ಬೆಂಗಳೂರು ಗ್ರಾಮಾಂತರ ಮತ್ತು ಬೆಂಗಳೂರು ನಗರ ಜಿಲ್ಲೆಗಳಲ್ಲಿ ಬಿರುಗಾಳಿ ಸಹಿತ ಸಾಧಾರಣ ಮಳೆಯಾಗಲಿದೆ.

ಮುಂದಿನ ವಾರ ಹೇಗಿರಲಿದೆ ಹವಾಮಾನ?: ಏಪ್ರಿಲ್ 6, 7 ಹಾಗೂ 8 ರಂದು ಕರಾವಳಿಯಲ್ಲಿ ಒಣಹವೆ ಇರಲಿದೆ. ಆದರೆ, ಒಳನಾಡಿನ ಜಿಲ್ಲೆಗಳಾದ ಬೀದರ್, ಕಲಬುರ್ಗಿ, ಯಾದಗಿರಿ, ರಾಯಚೂರು, ಬಳ್ಳಾರಿ, ವಿಜಯನಗರ, ಚಿತ್ರದುರ್ಗ, ಚಿಕ್ಕಬಳ್ಳಾಪುರ, ತುಮಕೂರು, ಬೆಂಗಳೂರು (ನಗರ & ಗ್ರಾಮಾಂತರ), ಕೋಲಾರ, ರಾಮನಗರ ಮತ್ತು ಚಾಮರಾಜನಗರ ಜಿಲ್ಲೆಗಳಲ್ಲಿ ಬಿರುಗಾಳಿ, ಗುಡುಗು ಸಹಿತ ಮಳೆ ಮುಂದುವರಿಯಲಿದೆ.

ಬೆಂಗಳೂರು ಲೋಕಲ್: ಮುಂದಿನ 24 ಗಂಟೆಗಳ ಕಾಲ ಸಿಲಿಕಾನ್ ಸಿಟಿಯಲ್ಲಿ ಭಾಗಶಃ ಮೋಡ ಕವಿದ ವಾತಾವರಣ ಇರಲಿದ್ದು, ಸಂಜೆ ಅಥವಾ ರಾತ್ರಿ ಗುಡುಗು ಸಹಿತ ಮಳೆಯಾಗುವ ಸಾಧ್ಯತೆ ಹೆಚ್ಚಿದೆ. ನಗರದ ಗರಿಷ್ಠ ತಾಪಮಾನ 33°C ಹಾಗೂ ಕನಿಷ್ಠ ತಾಪಮಾನ 21°C ಇರಲಿದೆ.

ಇಂದಿನ ಬಂಗಾರದ ದರ ಎಷ್ಟಿದೆ ನೋಡಿ

ಲೇಬರ್ ಕಾರ್ಡ್ ಇದ್ದವರಿಗೆ ಸರ್ಕಾರದಿಂದ ₹60,000 ಉಚಿತ ಸಹಾಯಧನ

Leave a Comment