ಹತ್ತನೇ ತರಗತಿ (SSLC) ಪರೀಕ್ಷೆ ಎಂದರೆ ಸಾಕು, ಬಹುತೇಕ ವಿದ್ಯಾರ್ಥಿಗಳಿಗೆ ಹಿಂದಿ ಅಥವಾ ತೃತೀಯ ಭಾಷೆಯದ್ದೇ ದೊಡ್ಡ ತಲೆಬಿಸಿ. “ಅದರಲ್ಲಿ ಕಡಿಮೆ ಅಂಕ ಬಂದರೆ ಒಟ್ಟು ಫಲಿತಾಂಶಕ್ಕೆ ಹೊಡೆತ ಬಿಳುತ್ತದೆ” ಎಂದು ನಿದ್ದೆಗೆಡುತ್ತಿದ್ದ ಲಕ್ಷಾಂತರ ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ರಾಜ್ಯ ಸರ್ಕಾರ ಭರ್ಜರಿ ಸಿಹಿಸುದ್ದಿ ನೀಡಿದೆ.
ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆಯು ಪರೀಕ್ಷಾ ನಿಯಮಗಳಲ್ಲಿ ಐತಿಹಾಸಿಕ ಬದಲಾವಣೆ ತರಲು ಮುಂದಾಗಿದ್ದು, ಈ ಕುರಿತು ಮಹತ್ವದ ಕರಡು ಅಧಿಸೂಚನೆ (Draft Notification) ಪ್ರಕಟಿಸಿದೆ. ಇದರ ಅನ್ವಯ, ಇನ್ಮುಂದೆ ತೃತೀಯ ಭಾಷೆಗೆ ಅಂಕಗಳ ಬದಲಾಗಿ ಕೇವಲ ‘ಗ್ರೇಡ್’ (ಶ್ರೇಣಿ) ನೀಡಲಾಗುತ್ತದೆ. ಅಂದರೆ, ತೃತೀಯ ಭಾಷೆಯಲ್ಲಿ ಪಾಸ್ ಆಗಲೇಬೇಕು ಎಂಬ ಕಡ್ಡಾಯ ನಿಯಮ ಇನ್ಮುಂದೆ ಇರುವುದಿಲ್ಲ.
ಹಾಗಾದರೆ, ಈ ಹೊಸ ರೂಲ್ಸ್ ಏನು? ಎಸ್ಸೆಸ್ಸೆಲ್ಸಿ ಪಾಸಾಗಲು ಎಷ್ಟು ಅಂಕ ತೆಗೆಯಬೇಕು? ಪೋಷಕರು ಹಾಗೂ ವಿದ್ಯಾರ್ಥಿಗಳು ತಿಳಿಯಲೇಬೇಕಾದ ಕಂಪ್ಲೀಟ್ ಡೀಟೇಲ್ಸ್ ಇಲ್ಲಿದೆ:
ಅಂಕಗಳ ಬದಲು ಕೇವಲ ‘ಗ್ರೇಡ್’:
ಹೊಸ ನಿಯಮದ ಪ್ರಕಾರ, ತೃತೀಯ ಭಾಷೆ ಮತ್ತು ಎನ್‌ಎಸ್‌ಕ್ಯೂಎಫ್ (NSQF – ರಾಷ್ಟ್ರೀಯ ಕೌಶಲ್ಯ ಅರ್ಹತಾ ಚೌಕಟ್ಟು) ವಿಷಯಗಳನ್ನು ಅಂಕಪಟ್ಟಿಯಲ್ಲಿ ಕೇವಲ ‘ಹೆಚ್ಚುವರಿ ವಿಷಯ’ಗಳನ್ನಾಗಿ ಪರಿಗಣಿಸಲಾಗುತ್ತದೆ. ಈ ವಿಷಯಗಳಲ್ಲಿ ವಿದ್ಯಾರ್ಥಿ ಗಳಿಸುವ ಅಂಕಗಳನ್ನು ಅವರು ‘ಪಾಸ್’ ಅಥವಾ ‘ಫೇಲ್’ ಎಂದು ನಿರ್ಧರಿಸಲು ಗಣನೆಗೆ ತೆಗೆದುಕೊಳ್ಳುವುದಿಲ್ಲ. ಬದಲಾಗಿ, ಈ ಕೆಳಗಿನಂತೆ ಗ್ರೇಡ್ ನೀಡಲಾಗುತ್ತದೆ:
- ‘A’ ಗ್ರೇಡ್: 80 ರಿಂದ 100 ಅಂಕ ಪಡೆದರೆ
- ‘B’ ಗ್ರೇಡ್: 50 ರಿಂದ 79 ಅಂಕ ಪಡೆದರೆ
- ‘C’ ಗ್ರೇಡ್: 49 ರವರೆಗೆ ಅಂಕ ಪಡೆದರೆ
ಒಂದು ವೇಳೆ ವಿದ್ಯಾರ್ಥಿ ತೃತೀಯ ಭಾಷೆಯಲ್ಲಿ ಕನಿಷ್ಠ ಅಂಕಗಳನ್ನೂ ಪಡೆಯದೆ ‘C’ ಗ್ರೇಡ್ ಪಡೆದರೂ, ಆತ ಫೇಲ್ ಎಂದು ಅರ್ಥವಲ್ಲ.
ಪಾಸ್ ಆಗಲು ಎಷ್ಟು ಅಂಕ ಬೇಕು? ಬದಲಾದ ನಿಯಮವೇನು?
ಎಸ್ಸೆಸ್ಸೆಲ್ಸಿ ಪರೀಕ್ಷೆ ಎಂದಿನಂತೆಯೇ 6 ವಿಷಯಗಳಿಗೆ ಒಟ್ಟು 625 ಅಂಕಗಳಿಗೆ ನಡೆಯಲಿದೆ. ಆದರೆ, ಅಂತಿಮ ಫಲಿತಾಂಶದ (ಉತ್ತೀರ್ಣತೆಯ) ಲೆಕ್ಕಾಚಾರದಲ್ಲಿ ಭಾರಿ ಬದಲಾವಣೆಯಾಗಲಿದೆ.
- 525ಕ್ಕೆ ಲೆಕ್ಕಾಚಾರ: ತೃತೀಯ ಭಾಷೆಯ 100 ಅಂಕಗಳನ್ನು ಅಂತಿಮ ಫಲಿತಾಂಶದಿಂದ ಕೈಬಿಟ್ಟಿರುವುದರಿಂದ, ಉಳಿದ 5 ವಿಷಯಗಳ ಒಟ್ಟು 525 ಅಂಕಗಳಿಗೆ ಮಾತ್ರ ಉತ್ತೀರ್ಣತೆಯ ಲೆಕ್ಕಾಚಾರ ನಡೆಯಲಿದೆ.
- ಕನಿಷ್ಠ 173 ಅಂಕ ಕಡ್ಡಾಯ: ವಿದ್ಯಾರ್ಥಿಗಳು ಪಾಸ್ ಆಗಲು ಉಳಿದ 5 ವಿಷಯಗಳಲ್ಲಿ (ಆಂತರಿಕ + ಬಾಹ್ಯ ಪರೀಕ್ಷೆ ಸೇರಿ) ಒಟ್ಟಾರೆ ಶೇ. 33 ರಷ್ಟು ಅಂದರೆ ಕನಿಷ್ಠ 173 ಅಂಕಗಳನ್ನು ಪಡೆಯಲೇಬೇಕು.
- ವಿಷಯವಾರು ಪಾಸಿಂಗ್: ಕೇವಲ ಒಟ್ಟು ಅಂಕಗಳಷ್ಟೇ ಅಲ್ಲ, ಪ್ರತಿಯೊಂದು ವಿಷಯದಲ್ಲೂ ಕನಿಷ್ಠ ಶೇ. 30 ರಷ್ಟು ಅಂಕಗಳನ್ನು ಗಳಿಸಿದರೆ ಮಾತ್ರ ವಿದ್ಯಾರ್ಥಿಯನ್ನು ‘ಉತ್ತೀರ್ಣ’ ಎಂದು ಅಧಿಕೃತವಾಗಿ ಘೋಷಿಸಲಾಗುತ್ತದೆ.
ಹೈಕೋರ್ಟ್ ಮೆಟ್ಟಿಲೇರಿದ್ದವರಿಗೆ 1 ಲಕ್ಷ ರೂ. ದಂಡ:
ಸರ್ಕಾರದ ಈ ನಿರ್ಧಾರ ಪರೀಕ್ಷೆಯ ಕೊನೆಯ ಹಂತದಲ್ಲಿ ಬಂದಿದ್ದು, ಇದು ವಿದ್ಯಾರ್ಥಿಗಳ ಭವಿಷ್ಯದ ಮೇಲೆ ಪರಿಣಾಮ ಬೀರಲಿದೆ ಎಂದು ಆರೋಪಿಸಿ ಹೆಚ್.ಎನ್. ಚಂದನಾ ಹಾಗೂ ಎಸ್. ವೆಂಕಟೇಶ್ ಎಂಬುವವರು ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಅರ್ಜಿ (PIL) ಸಲ್ಲಿಸಿದ್ದರು. ಆದರೆ, ಸರ್ಕಾರದ ಅಧಿಕೃತ ಆದೇಶದ ಪ್ರತಿ ಇಲ್ಲದೆ, ಕೇವಲ ಪತ್ರಿಕಾ ವರದಿಗಳನ್ನು ಆಧರಿಸಿ ಅರ್ಜಿ ಸಲ್ಲಿಸಿದ್ದಕ್ಕಾಗಿ ಗರಂ ಆದ ಹೈಕೋರ್ಟ್, ಅರ್ಜಿದಾರರಿಗೆ ಬರೋಬ್ಬರಿ 1 ಲಕ್ಷ ರೂ. ದಂಡ ವಿಧಿಸಿ, ಅರ್ಜಿಯನ್ನು ವಜಾಗೊಳಿಸಿ ಬಿಗ್ ಶಾಕ್ ನೀಡಿದೆ.
ನಿಮಗೂ ಆಕ್ಷೇಪಣೆ ಸಲ್ಲಿಸಲು ಅವಕಾಶವಿದೆ
ಶಿಕ್ಷಣ ಇಲಾಖೆಯು ಪ್ರಕಟಿಸಿರುವುದು ಕೇವಲ ‘ಕರಡು ಅಧಿಸೂಚನೆ’. ಈ ಹೊಸ ನಿಯಮಗಳ ಬಗ್ಗೆ ಪೋಷಕರು, ಶಿಕ್ಷಣ ತಜ್ಞರು ಅಥವಾ ಸಾರ್ವಜನಿಕರಿಗೆ ಯಾವುದೇ ಸಲಹೆ-ಸೂಚನೆ ಅಥವಾ ಆಕ್ಷೇಪಣೆಗಳಿದ್ದರೆ, ಅಧಿಸೂಚನೆ ಪ್ರಕಟವಾದ 7 ದಿನಗಳ ಒಳಗಾಗಿ ಶಾಲಾ ಶಿಕ್ಷಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗಳಿಗೆ ಸಲ್ಲಿಸಬಹುದಾಗಿದೆ.