ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕಡಿಮೆ ಅಂಕ ಬಂತು ಅಥವಾ ಫೇಲ್ ಆದೆವು ಎಂದು ಬೇಸರ ಮಾಡಿಕೊಂಡಿರುವ ವಿದ್ಯಾರ್ಥಿಗಳಿಗೆ ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯನಿರ್ಣಯ ಮಂಡಳಿ (KSEAB) ಮಹತ್ವದ ಮಾಹಿತಿಯೊಂದನ್ನು ನೀಡಿದೆ.
ಇದೇ ಮೇ ತಿಂಗಳಿನಲ್ಲಿ ‘ಎಸ್‌ಎಸ್‌ಎಲ್‌ಸಿ ಪರೀಕ್ಷೆ-2’ (SSLC Exam-2) ನಡೆಸಲಾಗುತ್ತಿದ್ದು, ಇದಕ್ಕಾಗಿ ಅಧಿಕೃತ ಮಾರ್ಗಸೂಚಿ ಹಾಗೂ ನೋಂದಣಿ ದಿನಾಂಕವನ್ನು ಪ್ರಕಟಿಸಿದೆ.
2026ರ ಪರೀಕ್ಷೆ-1 ಕ್ಕೆ ಗೈರು ಹಾಜರಾದವರು, ಪರೀಕ್ಷೆ ಪೂರ್ಣಗೊಳಿಸದವರು, ಹಿಂದಿನ ಸಾಲಿನಲ್ಲಿ ಅನುತ್ತೀರ್ಣರಾದವರು ಹಾಗೂ ಪಾಸ್ ಆಗಿದ್ದರೂ ಅಂಕಗಳನ್ನು ಮತ್ತಷ್ಟು ಉತ್ತಮಪಡಿಸಿಕೊಳ್ಳಲು (Improvement) ಬಯಸುವ ವಿದ್ಯಾರ್ಥಿಗಳು ಈ ಪರೀಕ್ಷೆ-2 ಅನ್ನು ಬರೆಯಬಹುದಾಗಿದೆ.
ಅರ್ಜಿ ಸಲ್ಲಿಕೆ ಯಾವಾಗ? ವಿದ್ಯಾರ್ಥಿಗಳು ತಾವು ಓದುತ್ತಿರುವ (ಅಥವಾ ಓದಿದ) ಶಾಲೆಯ ಮೂಲಕವೇ ಕಡ್ಡಾಯವಾಗಿ ಪರೀಕ್ಷೆ-2 ಕ್ಕೆ ನೋಂದಣಿ ಮಾಡಿಕೊಳ್ಳಬೇಕು. ಮಂಡಳಿಯ ಅಧಿಕೃತ ಶಾಲಾ ಲಾಗಿನ್‌ನಲ್ಲಿ ಏಪ್ರಿಲ್ 24 ರಿಂದಲೇ ಮಾಹಿತಿ ಅಪ್‌ಲೋಡ್ ಮಾಡಲು ಅವಕಾಶ ಕಲ್ಪಿಸಲಾಗಿದ್ದು, ಏಪ್ರಿಲ್ 30 ಅರ್ಜಿ ಸಲ್ಲಿಸಲು ಕಡೆಯ ದಿನವಾಗಿದೆ.
ಆನ್‌ಲೈನ್ ನೋಂದಣಿ ಮುಗಿದ ಬಳಿಕ ಮೇ 02 ರಂದು ಚಲನ್ ಮುದ್ರಿಸಿಕೊಂಡು, ಮೇ 04 ರೊಳಗೆ ಬ್ಯಾಂಕ್‌ನಲ್ಲಿ ಶುಲ್ಕ ಪಾವತಿಸಲು ಶಾಲಾ ಮುಖ್ಯಸ್ಥರಿಗೆ ಸೂಚಿಸಲಾಗಿದೆ.
SSLC Exam-2 ಪರೀಕ್ಷಾ ಶುಲ್ಕದ ವಿವರ:
| ಕ್ರ.ಸಂ | ಪರೀಕ್ಷಾ ಶುಲ್ಕದ ವಿವರ | ಶುಲ್ಕ ರೂ.ಗಳಲ್ಲಿ |
|---|---|---|
| 01 | ಒಂದು ವಿಷಯಕ್ಕೆ | ರೂ. 448/- |
| 02 | ಎರಡು ವಿಷಯಕ್ಕೆ | ರೂ. 559/- |
| 03 | 3 ಅಥವಾ ಮೂರಕ್ಕಿಂತ ಹೆಚ್ಚು ವಿಷಯಗಳಿಗೆ | ರೂ. 752/- |
ಈ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕ ಇಲ್ಲ: ರಾಜ್ಯ ಸರ್ಕಾರವು ಈ ಬಾರಿ ಕೆಲವು ವರ್ಗದ ವಿದ್ಯಾರ್ಥಿಗಳಿಗೆ ಪರೀಕ್ಷಾ ಶುಲ್ಕದಿಂದ ಸಂಪೂರ್ಣ ವಿನಾಯಿತಿ (Free) ನೀಡಿದ್ದು, ಅವರು ಉಚಿತವಾಗಿ ಪರೀಕ್ಷೆ-2 ಬರೆಯಬಹುದಾಗಿದೆ:
- ಪರಿಶಿಷ್ಟ ಜಾತಿ (SC), ಪರಿಶಿಷ್ಟ ಪಂಗಡ (ST) ಹಾಗೂ ವಿಭಿನ್ನ ಸಾಮರ್ಥ್ಯವುಳ್ಳ ವಿದ್ಯಾರ್ಥಿಗಳಿಗೆ ಶುಲ್ಕ ಕಟ್ಟುವಂತಿಲ್ಲ.
- 2026ರ ಪರೀಕ್ಷೆ-1 ಕ್ಕೆ ‘ಹೊಸ ಶಾಲಾ ವಿದ್ಯಾರ್ಥಿ’ಯಾಗಿ ನೋಂದಾಯಿಸಿಕೊಂಡು ಪರೀಕ್ಷೆ ಪೂರ್ಣಗೊಳಿಸದ (Not Completed) ವಿದ್ಯಾರ್ಥಿಗಳಿಗೂ ಶುಲ್ಕ ವಿನಾಯಿತಿ ಇದೆ.
- ತೃತೀಯ ಭಾಷೆ (ಹಿಂದಿ/ಸಂಸ್ಕೃತ ಇತ್ಯಾದಿ) ವಿಷಯದಲ್ಲಿ ಕೇವಲ ‘ಫಲಿತಾಂಶ ಉತ್ತಮಪಡಿಸಿಕೊಳ್ಳಲು’ ಪರೀಕ್ಷೆ ಬರೆಯುವ ವಿದ್ಯಾರ್ಥಿಗಳಿಗೂ ಶುಲ್ಕವಿರುವುದಿಲ್ಲ.
ಪ್ರಮುಖ ದಿನಾಂಕಗಳು:
| ಕ್ರ.ಸಂ | ವಿವರ | ನಿಗದಿಪಡಿಸಿರುವ ದಿನಾಂಕ |
|---|---|---|
| 1 | ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಲು ಪ್ರಾರಂಭ ದಿನಾಂಕ | 24.04.2026 |
| 2 | ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಮಾಹಿತಿಯನ್ನು ಅಪ್‌ಲೋಡ್ ಮಾಡಲು ನಿಗದಿಪಡಿಸಿದ ಅಂತಿಮ ದಿನಾಂಕ | 30.04.2026 |
| 3 | ಮಂಡಳಿ ಜಾಲತಾಣದ ಶಾಲಾ ಲಾಗಿನ್ ಮೂಲಕ ವಿದ್ಯಾರ್ಥಿಗಳ ಪರೀಕ್ಷಾ ಶುಲ್ಕದ ಚಲನ್ ಮುದ್ರಿಸಿಕೊಳ್ಳಲು ನಿಗದಿಪಡಿಸಿದ ದಿನಾಂಕ | 02.05.2026 |
| 4 | ಕ್ರಮ ಸಂಖ್ಯೆ-3ರಂತೆ ಚಲನ್ ಮುದ್ರಿಸಿಕೊಂಡು ಬ್ಯಾಂಕ್‌ಗೆ ಜಮೆ ಮಾಡಲು ನಿಗದಿಪಡಿಸಿದ ದಿನಾಂಕ | 02.05.2026 ರಿಂದ 04.05.2026 |
ವಿದ್ಯಾರ್ಥಿಗಳು ಗಮನಿಸಲೇಬೇಕಾದ ಪ್ರಮುಖ ಅಂಶಗಳು:
- ಫೋಟೋ-ಸಹಿ ಬೇಡ: 2026ರ ಪರೀಕ್ಷೆ-1ಕ್ಕೆ ಹಾಜರಾದ ಹಾಗೂ ಅನುತ್ತೀರ್ಣಗೊಂಡ ವಿದ್ಯಾರ್ಥಿಗಳ ಫೋಟೋ ಮತ್ತು ಸಹಿ ಮಂಡಳಿಯಲ್ಲಿಯೇ ಇರುವುದರಿಂದ, ಪರೀಕ್ಷೆ-2 ಕ್ಕೆ ನೋಂದಾಯಿಸುವಾಗ ಮರಳಿ ನೀಡುವ ಅಗತ್ಯವಿಲ್ಲ.
- ಮರುಮೌಲ್ಯಮಾಪನಕ್ಕೆ ಹಾಕಿದವರೂ ಅರ್ಜಿ ಹಾಕಿ: ಸ್ಕ್ಯಾನ್ ಕಾಪಿ ಅಥವಾ ಮರುಮೌಲ್ಯಮಾಪನಕ್ಕೆ (Revaluation) ಅರ್ಜಿ ಸಲ್ಲಿಸಿರುವ ವಿದ್ಯಾರ್ಥಿಗಳು, ಅದರ ಫಲಿತಾಂಶಕ್ಕೆ ಕಾಯದೆ ಮುನ್ನೆಚ್ಚರಿಕಾ ಕ್ರಮವಾಗಿ ಏಪ್ರಿಲ್ 30 ರೊಳಗೆ ಪರೀಕ್ಷೆ-2 ಕ್ಕೂ ನೋಂದಾಯಿಸಿಕೊಳ್ಳುವುದು ಕಡ್ಡಾಯವಾಗಿದೆ.
- ಸಹಾಯವಾಣಿ: ಪರೀಕ್ಷೆ-2 ರ ನೋಂದಣಿ ಬಗ್ಗೆ ಯಾವುದೇ ಗೊಂದಲಗಳಿದ್ದರೆ 080-23310075 ಅಥವಾ 080-23310076 ಸಂಖ್ಯೆಗಳಿಗೆ ಕರೆ ಮಾಡಿ ಮಾಹಿತಿ ಪಡೆಯಬಹುದು.
ಫೇಲ್ ಆದ ವಿದ್ಯಾರ್ಥಿಗಳು ಯಾವುದೇ ಕಾರಣಕ್ಕೂ ಎದೆಗುಂದದೆ, ತಕ್ಷಣವೇ ನಿಮ್ಮ ಶಾಲಾ ಶಿಕ್ಷಕರನ್ನು ಸಂಪರ್ಕಿಸಿ ಪರೀಕ್ಷೆ-2 ಕ್ಕೆ ನೋಂದಣಿ ಮಾಡಿಕೊಳ್ಳಿ.